ನವೀನ ಕಾಂಟ್ ತತ್ತ್ವ-
ಹೇಗಲ್ಲನ ತತ್ವದ ಪ್ರಾಬಲ್ಯ ಕುಗ್ಗಿ ಈ ಭೌತವಾದ ಹೆಚ್ಚಿಕೊಂಡಾಗ ಅದನ್ನು ತಡೆಗಟ್ಟಿ ಜೀವನ ಪುರುಷಾರ್ಥಗಳ ಮೇಲ್ಮೆಯನ್ನು ಸ್ಥಾಪಿಸಲು ಹುಟ್ಟಿದ ತತ್ತ್ವ. ಈ ತತ್ತ್ವಕ್ಕೆ ಕಾರಣರಾದವರು ಭೌತ ಮತ್ತು ಮಾನಸಿಕ ವಿಜ್ಞಾನದಲ್ಲಿ ಅತಿಶಯವಾದ ಆಸಕ್ತಿಯನ್ನು ಪಡೆದಿದ್ದರು. ವಿಜ್ಞಾನದ ಭದ್ರ ಬುನಾದಿಯ ಮೇಲೆ ತತ್ತ್ವ ಸೌಧವನ್ನು ಕಟ್ಟಿದ ವಿನಾ ಅದು ನೆಟ್ಟಗೆ ನಿಲ್ಲಲಾರದೆಂದು ಇವರ ಅಚಲ ನಂಬಿಕೆ. ಗಣಿತ ಮತ್ತು ಭೌತವಿಜ್ಞಾನ ಸಾಧ್ಯವಾಗುವುದು ಹೇಗೆ ಎಂಬುದನ್ನು ತೋರಿಸಿದ ಕಾಂಟನ ತತ್ತ್ವದ ನೆರವನ್ನು ಪಡೆದು, ಅವನ ವಿಮರ್ಶನಾತ್ಮಕ ವಿಧಾನವನ್ನು (ಕ್ರಿಟಿಕಲ್ ಮೆತೆಡ್) ಅನುಸರಿಸಿ ನವ್ಯ ರೀತಿಯಲ್ಲಿ ತಮ್ಮ ತತ್ತ್ವವನ್ನು ಬೆಳೆಸಿದರು. ಆದ್ದರಿಂದ ಇವರ ತತ್ತ್ವಕ್ಕೆ ನವೀನ್ ಕಾಂಟ್ ತತ್ತ್ವವೆಂದು ಹೆಸರಾಯಿತು. ಈ ತತ್ತ್ವಕ್ಕೆ ಕಾರಣರಾದವರು ಜರ್ಮನಿಯವರಾದ ಓ ಲೀಪ್ ಮಾನ್ (1840-1912), ಹರ್ಮನ್ ಲೋಟ್ಸ್ (1817-1881), ಗಸ್ಟೀವ್ ಥಿಯೋಡೋರ್ ಫೆಚ್ನರ್ (1801-1887), ಫ್ರೆಡರಿಚ್ ಪೌಲ್ಸನ್ (1849-1908), ವಿಲ್‍ಹೆಲ್ಮ್ ವುಂಟ್ (1832-1920), ವಿಲ್‍ಹೆಲ್ಮ್ ವಿಂಡೆಲ್‍ಬಾಂಟ್ (1848-1915) ಮತ್ತು ರುಡೋಲ್ಫ್ ಆಯ್ಕೆನ್ (1846-1926).

  	`ಕಾಂಟನತ್ತ ತಿರುಗಿ ನೋಡಿ (ಬ್ಯಾಕ್ ಟು ಕಾಂಟ್) ಎಂದು ಕಾಂಟ್ ಆ್ಯಂಡ್ ಡೈ ಎಪಿಗೋಸೆನ್ ಎಂಬ ಗ್ರಂಥದಲ್ಲಿ ಮೊಟ್ಟಮೊದಲಿಗೆ ಘೋಷಿಸಿ, ಲೀಪ್‍ಮಾನ್ ತನ್ನ ತತ್ತ್ವದಲ್ಲಿ ಜ್ಞಾನ ಮೀಮಾಂಸೆಗೆ (ಎಪಿಸ್ಟೆಮಾಲಜಿ) ಹೆಚ್ಚು ಗಮನ ಕೊಟ್ಟು, ಕಾಂಟನ ವೈಚಾರಿಕ ವಿಧಾನವನ್ನು ಬೆಳೆಸಿದ.

  	ಲೋಟ್ಸೆ ಕಾಂಟನ ತತ್ತ್ವವನ್ನ ಅನುಸರಿಸಿ ವಿಜ್ಞಾನದ ಅಗತ್ಯವನ್ನು ಅಂಗೀಕರಿಸಿದ ವಿಜ್ಞಾನ ಭೌತಪ್ರಪಂಚವನ್ನು ನಿಶ್ಚೇತನಭಾಗಗಳ ಒಂದು ಯಂತ್ರದಂತೆ ಭಾವಿಸಿ ಅದರ ಸಂಬಂಧಗಳನ್ನು ಕಾರ್ಯಕಾರಣ ಭಾವಕ್ಕೆ ಒಳಪಡಿಸಿ ತಿಳಿಸುತ್ತದೆ. ವಿಜ್ಞಾನ ವಿಶ್ವವನ್ನು ತಿಳಿದುಕೊಳ್ಳುವಾಗ ತಿಳಿದುಕೊಳ್ಳುವ ಆತ್ಮವನ್ನು ಗಣನೆಗೆ ತೆಗೆದುಕೊಳ್ಳದೆ ಬಿಟ್ಟುಬಿಡುತ್ತದೆ. ಅದು ಇದ್ದರು ಇಲ್ಲದಂತೆ ಭಾವಿಸಿ ಎಲ್ಲವೂ ಯಾಂತ್ರಿಕವೆಂದು ಭಾವಿಸುತ್ತದೆ. ಆದರೆ ನಮ್ಮ ಮನಸ್ಸಿನ ವಿಷಯ ಹೊರ ವಸ್ತುವಿನ ನಕಲಲ್ಲ ; ಅದು ಮನಸ್ಸಿನ ಪ್ರಕ್ರಿಯೆಯಿಂದ ಆತ್ಮದಲ್ಲಿ ಸೃಷ್ಟ್ಯಾತ್ಮಕವಾಗಿ ರೂಪುಗೊಂಡದ್ದು. ತಾರ್ಕಿಕ ನಿಯಮಗಳು ಆತ್ಮದ ವ್ಯಾಪಾರಕ್ಕೆ ಅಧೀನವಾದುವು. ಆದ್ದರಿಂದ ನಾವು ತಿಳಿದ ಪ್ರಪಂಚ ನಮ್ಮ ಅನುಭವದಿಂದ ಮಾರ್ಪಟ್ಟದ್ದು. ಅದು ಸ್ವಯಂನಿರ್ಮಿತ ಯಂತ್ರವಲ್ಲ. ಹೊರ ಪ್ರಪಂಚ ತಾನೇ ತಾನಾಗಿ ಹೇಗಿದೆ ಎಂಬುದನ್ನು ನಾವು ತಿಳಿಯಲಾರೆವು. ನಾವು ತಿಳಿದದ್ದು, ನಮ್ಮ ಆತ್ಮದಲ್ಲಿ ಆತ್ಮದ ಕ್ರಿಯೆಯ ಮೂಲ ಮಾರ್ಪಟ್ಟ, ವ್ಯಾವಹಾರಿಕ ಪ್ರಪಂಚ. ಇದ್ದದ್ದನ್ನು ಇದ್ದ ಹಾಗೇ ಸ್ವನಿಯೋಜಿತವಾದಂತೆ (ಸೆಲ್ಫ್‍ಡಿಟರ್‍ರ್ಮಿನ್ಡ್) ತಿಳಿಯಬಹುದಾದುದು ನಮ್ಮ ಆತ್ಮ ಒಂದೇ. ಬದಲಾವಣೆಗಳುದ್ದಕ್ಕೂ ಒಂದೇ ಆಗಿ ಇರುವಂತೆ ತಿಳಿಯಬಹುದಾದ್ದು ಆತ್ಮವೊಂದೇ. ನಮ್ಮ ಹೊರಗಡೆ ಇರುವ ವಸ್ತುಗಳೂ ಸ್ವತಂತ್ರವಾದವು ಎಂದು ಭಾವಿಸಬೇಕಾದರೆ, ಅವನ್ನು ಆತ್ಮದಂತೆಯೇ ಭಾವಿಸಬೇಕಾಗುತ್ತದೆ. ಲೋಟ್ಸೆ ಹೊರಪ್ರಪಂಚದ ಅಣುಗಳನ್ನು ಲೈಬ್ನಿಟ್ಸ್‍ನ ಮೊನ್ಯಾಡ್‍ಗಳಂತೆ ಸ್ವನಿಯಂತ್ರಿತವಾದುವೆಂದೂ ಈ ವಿಶ್ವ ಅಂಥ ಅಗಣಿತ ಮೊನ್ಯಾಡುಗಳಿಂದ ತುಂಬಿ ತುಳುಕುತ್ತಿದೆ ಎಂದೂ ಹೇಳಿ ಅನೇಕತಾವಾದವನ್ನು ಮಂಡಿಸಿದ್ದಾನೆ. 

   	ನಮ್ಮ ಜೀವನದಲ್ಲಿ ಮುಖ್ಯವಾದುವು ಸತ್ಯ, ಧರ್ಮ, ಸೌಂದರ್ಯ. ಇವನ್ನು ಸಾಧಿಸಿಕೊಳ್ಳಲು ನಮ್ಮನ್ನೂ ನಾವು ರೂಪಿಸಿಕೊಳ್ಳುವುದನ್ನೂ ನಮ್ಮ ಸುತ್ತಮುತ್ತ ಇರುವ ಪ್ರಪಂಚವನ್ನೂ ನಮ್ಮ ಧ್ಯೇಯಗಳಿಗೆ ಸಂಗತವಾಗಿ  ಅಳವಡಿಸಿಕೊಳ್ಳುವುದನ್ನೂ ತಿಳಿಸುವುದೇ ತತ್ತ್ವಶಾಸ್ತ್ರದ ಮುಖ್ಯಕರ್ತವ್ಯ. ನಮಗೂ ನಮ್ಮ ಹೊರಗೆ ಇರುವ ಎಲ್ಲಕ್ಕೂ ಪ್ರೇರಕವಾದ್ದೇ ದೈವ. 

  	ಲೀಪ್ಸಿಗ್ ವಿಶ್ವವಿದ್ಯಾನಿಲಯದಲ್ಲಿ ಭೌತವಿಜ್ಞಾನದ ಪ್ರಾಧ್ಯಾಪಕನಿದ್ದು ಮಾನಸಿಕ ಕ್ರಿಯೆಗಳನ್ನು ಭೌತವಿಜ್ಞಾನ ವಿಧಾನಕ್ಕನುಗುಣವಾಗಿ ಪ್ರಯೋಗಗಳ ಮೂಲಕ ತಿಳಿಸಲು ಪ್ರಯತ್ನಿಸಿದ. ಫೆಚ್ನರ್ ಭೌತವಿಧಾನದ ಆಧಾರದ ಮೇಲೆ ಸ್ಥಾಪಿಸಿದ ಮನೋವಿಜ್ಞಾನಕ್ಕೆ ಸೈಕೋಫಿಸಿಕ್ಸ್ ಎಂದು ಹೆಸರು. ಲೋಟ್ಸೆಯಂತೆ ಇವನೂ ನಮ್ಮ ಹೊರಗಿರುವ ವಸ್ತುಗಳು ನಮ್ಮಂತೆಯೇ ಚೇತನ ವಸ್ತುಗಳು ಎಂದು ಭಾವಿಸಿದ್ದಾನೆ. ಆದರೆ, ಪ್ರಾಣಿಗಳಲ್ಲಿರುವ ಚೇತನ ನಮ್ಮಲ್ಲಿರುವ ಚೇತನಕ್ಕಿಂತ ಅಸ್ಪಸ್ಟವಾದದ್ದು ಮತ್ತು ಅಲ್ಪವಾದದ್ದು. ಸಸ್ಯಗಳ ಚೇತನ ಪ್ರಾಣಿಗಳ ಚೇತನಕ್ಕಿಂತಲೂ ತಾಮಸಕರ. ಭೌತವಸ್ತುಗಳ ಚೇತನವಂತೂ ತಾಮಸತಮ. ಮಾನವ ಚೇತನಕ್ಕಿಂತ ಹೆಚ್ಚಿನ ಚೇತನಗಳು ಸಾಧ್ಯ. ಎಲ್ಲಕ್ಕಿಂತ ಹೆಚ್ಚು ತೀಕ್ಷ್ಣವೂ ವ್ಯಾಪಕವೂ ಆದ ಚೇತನವೇ ದಿವ್ಯಚೇತನ. ನಮ್ಮ ಶರೀರವನ್ನು ನಮ್ಮ ಆತ್ಮ ನಿಯಂತ್ರಿಸುವಂತೆ, ವಿಶ್ವವನ್ನು ದೈವ ನಿಯಂತ್ರಿಸುವುದಾಗಿ ಎಂದು ಭಾವಿಸಬೇಕು.
  	ಇಂಟ್ರೊಡಕ್ಷನ್ ಟು ಫಿಲಾಸಫಿ ಎಂಬ ತನ್ನ ಜರ್ಮನ್ ಗ್ರಂಥದಲ್ಲಿ ಪಾಲ್ಸನ್ ಎಂಬ ವಿದ್ವಾಂಸ ಲೋಟ್ಸೆ ಮತ್ತು ಫೆಚ್ನರ್ ತತ್ತ್ವಗಳಿಗೆ ಸದೃಶವಾದ ತತ್ತ್ವವನ್ನು ಪ್ರತಿಪಾದಿಸಿರುತ್ತಾನೆ. ಇದು ಇಂಗ್ಲಿಷ್‍ಗೆ ತರ್ಜುಮೆಯಾಗಿ ಅಮೆರಿಕ, ಇಂಗ್ಲೆಂಡ್ ಮತ್ತು ಭಾರತಗಳಲ್ಲಿ ಈ ಶತಮಾನದ ಆದಿಯಲ್ಲಿ ಅಧ್ಯಾಪಕರಿಗೂ ಮೆಚ್ಚಿನ ಗ್ರಂಥವಾಗಿತ್ತು.

  	ಪ್ರಾಯೋಗಿಕ ಮನೋವಿಜ್ಞಾನದ ಪಿತಾಮಹನಾದ ವುಂಟ್ ಭೌತವಿಜ್ಞಾನ ಮನೋವಿಜ್ಞಾನ ಮುಂತಾದ ವೈಜ್ಞಾನಿಕ ವಿಷಯವನ್ನು ನೀತಿಶಾಸ್ತ್ರ ಸಾಮಾಜಿಕ ಶಾಸ್ತ್ರಗಳೊಡನೆ ಹೊಂದಿಸಿ ಒಂದು ಸುವ್ಯವಸ್ಥಿತ ಜ್ಞಾನವನ್ನಾಗಿ ಏರ್ಪಡಿಸುವ ಶಾಸ್ತ್ರವೇ ತತ್ತ್ವಶಾಸ್ತ್ರವೆಂದು ಸಾರಿದ ಇವನು ಫೆಚ್ನರ್‍ನಂತೆ ವಿಶ್ವ ಅನೇಕ ರೀತಿಯಲ್ಲಿ ಹಂತಹಂತವಾಗಿ ಪರಿಣಾಮಗೊಂಡ ಚೇತನ ವಸ್ತುಗಳ ಸಮುದಾಯವೆಂದು ಭಾವಿಸಿದ. ಷೊಪೆನ್ ಹೌರನಂತೆ, ಅಚೇತನದಲ್ಲಿ ಕ್ರಿಯಾ ಅಥವಾ ಸಂಕಲ್ಪಶಕ್ತಿಯೇ ಪ್ರಧಾನವೆಂದು ವಾದಿಸಿದ್ದರಿಂದ ಈತನ ತತ್ತ್ವಕ್ಕೆ ವಾಲಂಟರಿಸಂ ಎಂದು ಹೆಸರು ಬಂದಿದೆ.

   	ಕಾಂಟ್ ಜ್ಞಾನತತ್ತ್ವದಿಂದ ತನ್ನ ತತ್ತ್ವವನ್ನು ಪ್ರಾರಂಭಿಸಿದರೂ ಕೊನೆಯಲ್ಲಿ ನೀತಿತತ್ತ್ವಕ್ಕೂ ಸೌಂದರ್ಯ ತತ್ತ್ವಕ್ಕೂ ಪ್ರಾಮುಖ್ಯ ಕೊಟ್ಟ. ಹೀಗೆ ಅವನ ತತ್ತ್ವ ಪುರುಷಾರ್ಥ ಪ್ರಧಾನ ತತ್ತ್ವಕ್ಕೆ ದಾರಿ ಮಾಡಿಕೊಟ್ಟಿತು. ನವೀನ ಕಾಂಟ್‍ವಾದಿಗಳು ತಮ್ಮ ತತ್ತ್ವದಲ್ಲಿ ಪುರುಷಾರ್ಥಗಳಿಗೆ ವಿಶೇಷ ಗಮನ ಕೊಟ್ಟರು. ಪುರುಷಾರ್ಥ ತತ್ತ್ವವನ್ನೇ ಪರತತ್ತ್ವವನ್ನಾಗಿ ಮಾಡಿದವ ವಿಂಡೆಲ್‍ಬಾಂಟ್. ತತ್ತ್ವಶಾಸ್ತ್ರ ಅವನ ಪ್ರಕಾರ ಪರಮ ಪುರುಷಾರ್ಥಶಾಸ್ತ್ರ (ಫಿಲಾಸಫಿ ಆಫ್ ವ್ಯಾಲ್ಯೂಸ್). 
 
 	ಆಯ್ಕೆನ್, ಧರ್ಮವನ್ನೂ, ಸೌಂದರ್ಯವನ್ನೂ, ಮತಶ್ರದ್ಧೆಯನ್ನೂ ತರ್ಕಕ್ಕೆ ಸಂಗತವಾಗುವಂತೆ ವ್ಯವಸ್ಥೆಗೊಳಿಸಿದ. ವಿಶ್ವದಲ್ಲಿ ಭೌತಾಣುಗಳಿಂದ ಹಿಡಿದು ಸಾಧುಸಂತರವರೆಗೂ ಎಲ್ಲವೂ ತನ್ನಲ್ಲಿ ಅಡಗಿರುವ ರೂಪವನ್ನು ಪರಿಪೂರ್ಣಗೊಳಿಸಿಕೊಳ್ಳಲು ತವಕಪಡುತ್ತಿವೆ. ಉಪ್ಪುನೀರಿನಲ್ಲಿರುವ ಉಪ್ಪು ಪೂರ್ಣವಾಗಿ ವಿಕಾಸ ಹೊಂದಿದ ಸುಂದರ ಚಚ್ಚೌಕ ರೂಪದ ಹರಳಾಗಲು ತವಕಪಡುತ್ತದೆ. ಅಂತೆಯೇ ಸಸ್ಯಗಳೂ ಕ್ರಿಮಿಕೀಟಗಳೂ, ಚತುಷ್ಪಾದಿಗಳೂ, ಮಾನವರೂ ತಮ್ಮ ಸ್ವರೂಪವನ್ನು ಸುರೂಪವಾಗಿ ವಿಕಾಸಗೊಳ್ಳಲು ಮಿಡಿಯುತ್ತಿವೆ. ಮಣ್ಣಿನ ಹೆಂಟೆ ಮೊಳಕೆಯಾಗಿ ಪರಿಣಮಿಸುವ ಕನಸು ಕಾಣುತ್ತಿದೆ. ಸಸ್ಯ ಪ್ರಾಣಿಯಾಗುವ ಕನಸು ಕಾಣುತ್ತಿದೆ, ಪ್ರಾಣಿ ಮಾನವನಾಗಲು ಕನವರಿಸುತ್ತ್ತಿದೆ, ಮಾನವ ಅತಿ ಮಾನವನಾಗಲು ಹಂಬಲಿಸುತ್ತಿದ್ದಾನೆ. ಹೀಗೆ ವಿಶ್ವಕ್ರಿಯೆ ಭೌತಸ್ಥಿತಿಯಿಂದ ಸಸ್ಯಸ್ಥಿತಿಯನ್ನೂ, ಸಸ್ಯಸ್ಥಿತಿಯಿಂದ ಪ್ರಾಣಿಸ್ಥಿತಿಯನ್ನೂ, ಪ್ರಾಣಿ ಸ್ಥಿತಿಯಿಂದ ಚೇತನಸ್ಥಿತಿಯನ್ನೂ, ಮಾನವ ಚೇತನ ಸ್ಥಿತಿಯಿಂದ ದಿವ್ಯಚೇತನಸ್ಥಿತಿಯನ್ನೂ ಪಡೆಯಲು ವಿಕಾಸಗೊಳ್ಳುತ್ತಿದೆ. ವಿಶ್ವಕ್ರಿಯೆ ವಿಕಾಸಹೊಂದಿ ಸ್ವತಂತ್ರವನ್ನೂ, ಸ್ವಾತ್ಮಸಿದ್ಧಿಯನ್ನೂ ಗಳಿಸಬಲ್ಲ ಚೇತನಶಕ್ತಿಯಾಗಿ ಪರಿಣಮಿಸುತ್ತಿದೆ. ವ್ಯಕ್ತಿ ಚೇತನ ಬೆಳೆಯಬೇಕಾದರೆ, ಚೇತನ ವ್ಯಕ್ತಿ ತಾನಿರುವ ವಿಶ್ವದ ಎಲ್ಲವನ್ನೂ ಸಹನೆಯಿಂದ ತಿಳಿದು ಅವುಗಳೊಡನೆ ಸಹಬಾಳ್ವೆ ನಡೆಸಿ ಆ ಒಂದೊಂದರ ವ್ಯಕ್ತಿತ್ವವನ್ನೂ ಗೌರವಿಸಬೇಕು. ಎಲ್ಲವೂ ತನ್ನತನವನ್ನು ಪಡೆದಿದೆಯೆಂದು ಗೌರವಿಸಿ ಯಾವುದನ್ನೂ ಇನ್ನೊಂದಕ್ಕೆ ಕೇವಲ ಸಾಧನವಲ್ಲವೆಂದು ಭಾವಿಸದೇ, ಅಹಂಭಾವವನ್ನು ತೊರೆದು ಬಾಳಿದಾಗ ಒಬ್ಬನ ಪೂಜ್ಯಭಾವನೆ ಪರಿಪೂರ್ಣವಾಗುತ್ತದೆ. ಹೀಗೆ ದೈವೀಭಾವನೆ ಪುರುಷಾರ್ಥ ತತ್ತ್ವಕ್ಕೆ ಕಿರೀಟಪ್ರಾಯವಾಗುತ್ತದೆ. 

  	ಚಿರಂತರ ಪುರುಷಾರ್ಥಗಳು (ಇಟರ್ನಲ್ ವ್ಯಾಲ್ಯೂಸ್) ಎಂಬ ಪ್ರಸಿದ್ಧ ಗ್ರಂಥವನ್ನು 1909ರಲ್ಲಿ ಬರೆದ ಹ್ಯೂಗೋ ಮನ್‍ಸ್ಟರ್‍ಬರ್ಗ್‍ನೂ ನೂತನ ಕಾಂಟ್ ಪಂಥಕ್ಕೆ ಸೇರಿದವ.	
					(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ